Saturday, October 17, 2009

ಸಾಕ್ಷಾತ್ ಶ್ರೀ ಕೃಷ್ಣನೇ ಒಡೆಯುವ ಮೂಡುಬಿದಿರೆ ಮೊಸರು ಕುಡಿಕೆ

ಸಾಕ್ಷಾತ್ ಶ್ರೀ ಕೃಷ್ಣನೇ ಒಡೆಯುವ ಮೂಡುಬಿದಿರೆ ಮೊಸರು ಕುಡಿಕೆ

ಆ ದಿನ ಸರಿಸುಮಾರು ೧.೩೦ ಗಂಟೆ ಹೊತ್ತಿಗೆ ಮೂಡುಬಿದಿರೆಯ ಶ್ರೀ ಗೋಪಾಲಕೃಷ್ಣ ದೇವಾಲಯದಿಂದ ಸಾಕ್ಷಾತ್ ಶ್ರೀಕೃಷ್ಣ ಹೊರಡುತ್ತಾನೆ. ನರರೂಪಿಯಾಗಿ, ಯಕ್ಷಗಾನ ವೇಷಧಾರಿಯಾಗಿ, ಚಕ್ರಧಾರಿಯಾಗಿ ಮುಖ್ಯ ರಸ್ತೆಯಲ್ಲಿ ಯಕ್ಷಗಾನದ ಚೆಂಡೆ-ಮದ್ದಳೆ ದನಿಗೆ ಹೆಜ್ಜೆ ಹಾಕುತ್ತಾ ತೆಂಕು ತಿಟ್ಟು ಶೈಲಿಯಲ್ಲಿ ಕುಣಿಯುತ್ತಾ ಮುಂದೆ ಸಾಗುತ್ತಾನೆ. ಶ್ರೀ ಕೃಷ್ಣನಿಗೆ ಎಟಕುವಂತೆ ಕಟ್ಟಲಾದ ಮಡಿಕೆಗಳನ್ನು ತನ್ನ ಚಕ್ರದಿಂದ ರಕ್ಕಸರ ಶಿರ ಮರ್ಧಿಸಿದಂತೆ ಕುಟ್ಟಿಪುಡಿ ಮಾಡುತ್ತಾನೆ. ಅದರೊಳಗೆ ತುಂಬಲಾಗಿರುವ ಬಣ್ಣಬಣ್ಣದ ನೀರು, ಹಣ್ಣು, ವಸ್ತುಗಳು ತನ್ನ ತಲೆ ಮೇಲೆ ಬೀಳದಂತೆ ತಪ್ಪಿಸಿಕೊಂಡು ಮಡಕೆಗಳನ್ನು ಒಡೆಯುತ್ತಾನೆ. ಕೆಲವು ಕಡೆಗಳಲ್ಲಿ ಯುವಕರು ಮಡಕೆ ಕಟ್ಟಿದ ಹಗ್ಗಗಳನ್ನು ಮೇಲೆ ಕೆಳಗೆ ಅಲ್ಲಾಡಿಸಿ ಕುಣಿಸಿ ಮಜಾ ತೆಗೆದುಕೊಳ್ಳುವುದಿದೆ.
ಬೇರೆ ಊರುಗಳಂತೆ ಎಣ್ಣೆ ಹಚ್ಚಿ ತಿಕ್ಕಿ ತೀಡಿದ ಕಂಗಿನ ಮರವೇರಿಯೋ ಅಥವಾ ಆಗಸದೆತ್ತರ ಕಟ್ಟಿದ ಮಡಕೆಗಳನ್ನು ಮಾನವ ಸರಪಣಿ ಮಾಡಿ ಮಡಕೆ ಒಡೆಯಲು ಇಡೀ ಊರಿನಲ್ಲಿ ಎಲ್ಲೆಲ್ಲೂ ಅವಕಾಶವೇ ಇಲ್ಲ. ಇಲ್ಲಿ ಎಲ್ಲವೂ ಕೃಷ್ಣಮಯ ........................... ಶ್ರೀ ಕೃಷ್ಣಮಯ
ಪುರದ ಬೀದಿಯಲ್ಲಿಯ ಸುಮಾರು ಮಡಕೆಗಳನ್ನು ಅಥವಾ ಮೊಸರು ಕುಡಿಕೆಗಳನ್ನು ಒಡೆದು ಇಕ್ಕೆಲದಲ್ಲಿ ಸೇರಿರುವ ಸಹಸ್ರ ಪುರಜನರ ಸಂಭ್ರಮ, ಪ್ರೀತಿ ಪಡೆದು ಬರುವ ಕೃಷ್ಣ ಗುಡಿಗೆ ಹಿಂತಿರುಗುವಾಗ ರಾತ್ರಿ ೮.೦೦ ಕಳೆಯುತ್ತದೆ. ಈ ಸಂಪ್ರದಾಯ ಹೇಗೆ ಆರಂಭವಾಯಿತು ಎಂಬ ಮಾತಿಗೆ ಖಚಿತ ಮಾಹಿತಿ ಸಿಗಲೊಲ್ಲದು. ಒಮ್ಮೆ ನಿಂತಿದ್ದ ಈ ಪದ್ದತಿಗೆ ದೇವಳ ಧಾರ್ಮಿಕ ಪ್ರಶ್ನೆ ಕಾರ್ಯಕ್ರಮದ ಮೂಲಕ ಉತ್ತರ ಕಂಡುಕೊಂಡು ಪುನರಾರಂಭಿಸಲಾಗಿದೆ. ಪದ್ದತಿ ಪುನಃ ಜೀವಿತಕ್ಕೆ ಬಂದು ಹತ್ತಿರ ಹತ್ತಿರ ೮೫ ವರ್ಷಗಳಾಯಿತೆಂಬ ಅಭಿಪ್ರಾಯವಿದೆ. ಇದು ಕುಟುಂಬದ ದೇವಾಲಯ ಮೊಕ್ತೇಸರರಾಗಿ ಗುರುಪ್ರಸಾದ್ ಇದ್ದಾರೆ. ಮೋನಪ್ಪ ಕುಲಾಲ್ ಶ್ರೀ ಕೃಷ್ಣ ವೇಷಧಾರಿಯಾಗಿದ್ದವರು ಈಗ ಅವರ ಮಗ ಸುಧಾಕರ ಕುಲಾಲ್ ಶ್ರೀ ಕೃಷ್ಣ ವೇಷ ಸೇವೆ ಮಾಡುತ್ತಿದ್ದಾರೆ.
ಕಳೆದ ಎರಡೂವರೆ ದಶಕಗಳಿಂದ ಶ್ರೀ ಕೃಷ್ಣ ಫ್ರೆಂಡ್ಸ್ ಕ್ಲಬ್ ಓಊ ೧೩ ಮುಖ್ಯ ರಸ್ತೆಯಲ್ಲಿ ಹಿರಿಯರಿಗೆ ಸನ್ಮಾನ ಸಭೆ ಮತ್ತು ನಾಟ್ಯರಂಜನೆಯ ಕಾರ್ಯಕ್ರಮ ಮಾಡುತ್ತಿದೆ. ಇತ್ತೀಚೆಗೆ ನ್ಯೂ ಕೃಷ್ಣ ಫ್ರೆಂಡ್ಸ್ ಕ್ಲಬ್ ಕೂಡ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಅಧ್ಯಯನ ಯೋಗ್ಯ, ಸಾಂಸ್ಕೃತಿಕ ವಿಶೇಷ ಇದಾಗಿದ್ದು ಈ ಸಾರಿಯ ಸವಿ ಸವಿಯಲು, ವಿಶೇಷ ತಿಳಿಯಲು ಮುಂದಿನ ವರ್ಷ ಖಂಡಿತಾ ಬನ್ನಿ ರಂದು ಮೂಡುಬಿದಿರೆಗೆ ಬಮತ್ತೆ ಚಿತ್ರ ನೋಡಿ ಸಮಾಧಾನ ಪಟ್ಟುಕೊಂಡು - ನೈಜ ಸೊಬಗಿನ ಭಾಗ್ಯದಿಂದ ವಂಚಿತರಾವುದು ಖಂಡಿತಾ ಬೇಡ !
ವರ್ಷದ ಬಳಿಕ ನಮ್ಮ ನಿಮ್ಮ ಭೇಟಿ ಧರೆಯ ರಸ್ತೆಯೊಳ್ ನಡೆದು ಸಾಗುವ ಶ್ರೀ ಕೃಷ್ಣನ ಜೊತೆಗೆ . . . . . . . . . .


ಶೇಖರ ಅಜೆಕಾರು